ತಿಮಿರ -
	ಸುಲಭವಾಗಿ ಗುರುತಿಸಬಲ್ಲ ರೋಗ ಚಿಹ್ನೆಯಾದ ಕೆರೆತ ಅಥವಾ ನವೆ (ಇಚಿಂಗ್).  ಉದಾಹರಣೆಗೆ ಕಜ್ಜಿರೋಗದ ಮುಖ್ಯವಾದ ಚಿಹ್ನೆ ತಿಮಿರ. ತಿಮಿರ ಒಂದೆಡೆ ಇರಬಹುದು, ಇಲ್ಲವೇ ಮೈಯೆಲ್ಲ ಇರಬಹುದು.  ಒಂದೇ  ಸಮ ಇರಬಹುದು ಅಥವಾ ಆಗಾಗ ಬರಬಹುದು.  ಅನೇಕ ವೇಳೆ ತಿಮಿರಕ್ಕೆ ಕಾರಣ ಪತ್ತೆಹಚ್ಚುವುದು ಸಮಸ್ಯೆಯೇ ಸರಿ.  ರೋಗಿ ಆತ್ಮಹತ್ಯೆಗೆ ಪ್ರಯತ್ನಿಸುವಷ್ಟು ತೀವ್ರವಾಗಿ ತಿಮಿರವಿದ್ದರೂ ಅದಕ್ಕೆ ಕಾರಣ ಕಂಡುಹಿಡಿಯುವುದು ಮಾತ್ರ ಸುಲಭ ಸಾಧ್ಯವಾಗದಿರಬಹುದು.  ಕಾರಣ ದೃಢವಾಗದ ಸ್ವತಃಸಿದ್ಧ ಚಿಹ್ನೆಗೆ ಅನೇಕ ವೇಳೆ ಮಾನಸಿಕ ಅಂಶ ಅಥವಾ ಒಗ್ಗದಿಕೆ ಕಾರಣವಾಗುವುದುಂಟು.  ತಿಮಿರವಾಗುವ ಚರ್ಮ ತವೆಸಿರಬಹುದು. ಅದರಲ್ಲಿ ನೋಡಲು ಯಾವ ಬದಲಾವಣೆಯೂ ಇಲ್ಲದಿರಬಹುದು. ತಿಮಿರ ಬಿಸಿಲಿನ ಬೇಗೆಯಿಂದಲೋ ಉಣ್ಣೆ ಬಟ್ಟೆಗಳನ್ನು ತೊಡುವುದರಿಂದಲೋ ಉಂಟಾಗಬಹುದು.  ಇಲ್ಲವೇ ಸಾಮಾನ್ಯವಾಗಿ ಚರ್ಮಕ್ಕೆ ಧಕ್ಕೆ ತರದ ಸಕ್ಕರೆ, ಹಿಟ್ಟು ಮೊದಲಾದ ವಸ್ತುಗಳು ತಾಕುವುದರಿಂದ ತಿಮಿರವಾಗುವುದೆಂದು ರೋಗಿ ಹೇಳಬಹುದು. ತಿಮಿರವಿರುವ ರೋಗಿಗಳನ್ನು ಕೂಲಂಕಷವಾಗಿ ಪರೀಕ್ಷಿಸಬೇಕು.  ಇವರ ಸಾಮಾನ್ಯ ಆರೋಗ್ಯ ಸ್ಥಿತಿ, ಮಲಮೂತ್ರ ತಪಾಸಣೆ ಅವಶ್ಯಕ.  ಸಿಹಿಮೂತ್ರ ರೋಗ, ಮೂತ್ರ ಜನಕಾಂಗದ ಉರಿತ, ಜಂತುಹುಳುಗಳು ಮತ್ತು ಹಾಡ್ಗ್‍ಕಿನ್ಸ್ ರೋಗ ಇವೇನಾದರೂ ಇವೆಯೋ ಎನ್ನುವುದನ್ನೂ ತನಿಖೆ ಮಾಡಬೇಕು.  ತಿಮಿರ ಉಂಟಾಗದಿರಲು  ಹತ್ತಿಯ ಬಟ್ಟೆಯಿಂದ ತಯಾರಿಸಿದ ಒಳತೊಡಿಗೆಗಳನ್ನು ಬಳಸಬೇಕು ಮತ್ತು ಕೆರಳಿಸುವ ವಸ್ತುಗಳೊಡನೆ ನಿರಂತರ ಸ್ಪರ್ಶ ಇರದಂತೆ ನೋಡಿಕೊಳ್ಳಬೇಕು. ತಡೆದ ಮದ್ದುಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಇಂಥ ಮದ್ದುಗಳಿಗೆ ಸುಲಭವಾಗಿ ದುಶ್ಚಟ ಹುಟ್ಟುವುದು ಸಾಮಾನ್ಯವಾದ್ದರಿಂದ ಎಚ್ಚರಿಕೆ ಅಗತ್ಯ. 

ನಾಲ್ಕು ತೆರನಾದ ತಿಮಿರದ ಪ್ರಭೇದಗಳನ್ನು ಗಮನಿಸಬಹುದು : 1 ಆಸನದ ತಿಮಿರ, 2 ಭಗದ್ವಾರ ತಿಮಿರ, 3 ಮುಪ್ಪಿನ ತಿಮಿರ, 4 ಸ್ನಾನದ ತಿಮಿರ. 

	ಆಸನದ ತಿಮಿರ ಮಕ್ಕಳಲ್ಲಾದರೆ ದಾರಹುಳು ಕಾರಣ. ವಯಸ್ಕರಲ್ಲಿ ಸಾಮಾನ್ಯವಾಗಿ ಗಂಡಸರಲ್ಲೆ ಹೆಚ್ಚು ಇದಕ್ಕೆ ಕಾರಣ ಆಸನದ ಸುತ್ತಲ ಚರ್ಮದ ಉರಿತ ಇಲ್ಲವೇ ಗುದನಾಳ ರೋಗ (ಮೂಳೆ, ಹಲಪದ, ಏಡಿಹುಣ್ಣು), ಯಾವ ಕಾರಣದಿಂದಾಗಲಿ ಆಸನದ ಸುತ್ತಣ ಚರ್ಮ ಸದಾ ತೇವವಾಗುವುದು ಸ್ವಾಭಾವಿಕ. ಅನೇಕ ವೇಳೆ ಮಾನಸಿಕ ಕಾರಣಗಳಿಂದಲೂ ತಿಮಿರವಾಗಬಹುದು.  ತಿಮಿರ ಸಾಮಾನ್ಯವಾಗಿ ರಾತ್ರಿ ಹೆಚ್ಚು.  ಭಗದ್ವಾರ ತಿಮಿರ ಹೆಂಗಸರಲ್ಲಿ ಮಾತ್ರ ಎನ್ನುವುದು ಸ್ವಯಂವೇದ್ಯ.  ಇದು ಯಾವ ವಯಸ್ಸಿನವರಲ್ಲಾದರೂ ಬರಬಹುದು.  ಮಕ್ಕಳಲ್ಲಿ ದಾರಹುಳು ಕಾರಣ.  ದೊಡ್ಡವರಲ್ಲಿ ಯೋನಿಯೊಳಗಿನ ಸೋಂಕಿನಿಂದಾಗುವ ಬಿಳಿಸೆರಗು ಕಾರಣ.  ಗರ್ಭಿಣಿಯರಲ್ಲಿ ಸಿರೆಯಲ್ಲಿ ರಕ್ತದ ಒತ್ತಡದಿಂದಲೂ ಭಗದ್ವಾರದಲ್ಲಿ ತಿಮಿರ ಉಂಟಾಗಬಹುದು.  ಮುಪ್ಪಿನ ತಿಮಿರ 65 ವರ್ಷಕ್ಕೆ ಮೀರಿದವರಲ್ಲಿ ಸಾಮಾನ್ಯ., ಸ್ವಲ್ಪಮಟ್ಟಿಗೆ ಚರ್ಮ ತವಿಸಿರುವುದು.  ಕೆಲವು ಮೇಳೆ ಚರ್ಮ ಒಣಕಲಾಗಿರುತ್ತದೆ.  ಮುಪ್ಪಿನ ತಿಮಿರ ಪ್ರಸಂಗಗಳಲ್ಲಿ ಮೈ ಹೇನು  ಮತ್ತು ನಂಜುರೋಧಕ ಮೊದಲಾದ ವಸ್ತುಗಳಿಗೆ ಚುರುಕುಗೊಂಡಿರುವ ಸಾಧ್ಯತೆಯನ್ನು ಗಮನದಲ್ಲಿಡಬೇಕು.  ಪ್ರತಿದಿನ ಅನೇಕ ಬಾರಿ ಸ್ನಾನಮಾಡುವುದರಿಂದ ಸ್ನಾನದ ತಿಮಿರ ಉಂಟಾಗುವುದು. ಚರ್ಮ ಒಣಕಲಾಗಿರುವುದೂ ಕೆರೆತದ ಗುರುತುಗಳೂ ಇನ್ನಾವ ಚಿಹ್ನೆಗಳೂ ಇದರಲ್ಲಿ ಇರುವುದಿಲ್ಲ. ತಿಮಿರ ಸಾಮಾನ್ಯವಾಗಿ ಕಾಲುಗಳು ಮತ್ತು ಮುಂಡಕ್ಕೆ ಸೀಮಿತವಾಗಿರುವುದು.  ಸಾಬೂನು ಮತ್ತು ಕ್ರಿಮಿನಾಶಕಗಳ ಕೆರಳಿಕೆಗಳು ಕಾರಣವಾಗುವುದನ್ನು ಗಮನಿಸಬೇಕು.	(ಡಿ.ಪಿ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ